10 ಪದ್ಯ-2

ಹಕ್ಕಿಹಾರುತಿದೆ ನೋಡಿದಿರಾ

ಹಕ್ಕಿಹಾರುತಿದೆ ನೋಡಿದಿರಾ - ಬೇಂದ್ರೆ
ಕವಿಪರಿಚಯ
ಕಾವ್ಯನಾಮ :
ಅಂಬಿಕಾತನಯದತ್ತ
ನಿಜನಾಮ/ಪೂರ್ಣನಾಮ :
ದತ್ತಾತ್ರೇಯ ರಾಮಚಂದ್ರ ಬೇಂದ್ರೆ.
ಜನನ :
೧೮೯೬ ಜನವರಿ ೩೧.
ಮರಣ :
೧೯೮೧ ಅಕ್ಟೋಬರ್ ೨೬.
ತಂದೆ :
ರಾಮಚಂದ್ರ ಬೇಂದ್ರೆ.
ತಾಯಿ:
ಅಂಬವ್ವ
ಜನ್ಮ ಸ್ಥಳ :
ಧಾರವಾಡ
ಪತ್ನಿ :               
ಲಕ್ಷ್ಮೀಬಾಯಿ
ವಿವಾಹವಾದ ದಿನ :
೧೯೧೯ರಂದು ಹುಬ್ಬಳ್ಳಿಯಲ್ಲಿ
ಮಕ್ಕಳು :
ವಾಮನ ಬೇಂದ್ರೆ.
ಮನೆ, ಮನೆತನ :
ಧಾರವಾಡದ ಸಾಧನಕೇರಿಯಲ್ಲಿ, ವೈದಿಕ.

ವಿದ್ಯಾಭ್ಯಾಸ :
ಪ್ರಾಥಮಿಕ :
೧೯೧೩ ರಲ್ಲಿ ಮೆಟ್ರಿಕ್.
ಪ್ರೌಢಶಾಲೆ :

ಪದವಿ:
೧೯೧೮ ರಲ್ಲಿ ಬಿ. . ಪದವಿ.

೧೯೩೫ ರಲ್ಲಿ ಎಂ. . ಪದವಿ.

ವೃತ್ತಿ:
* ವಿಕ್ಟೋರಿಯಾ ಹೈಸ್ಕೂಲ್(ಈಗಿನ ವಿದ್ಯಾರಣ್ಯ ಹೈಸ್ಕೂಲ್)ನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭ.
* ನರಬಲಿ ಕವನ ಪ್ರಕಟಿಸಿ ಕೆಲಸ ಕಳೆದುಕೊಂಡು ನಂತರ ಗದಗಿನ ವಿದ್ಯಾದಾನ ಸಮಿತಿ ಶಾಲೆಯ ಮುಖ್ಯ
   
ಅಧ್ಯಾಪಕರಾದರು.
* ೧೯೩೫ರಲ್ಲಿ ಸೊಲ್ಲಾಪುರದಲ್ಲಿ ..ವಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.
* ನಿವೃತ್ತಿಯ ನಂತರ ಧಾರವಾಡ ಆಕಾಶವಾಣಿ ಕೇಂದ್ರದ ಸಲಹೆಗಾರರಾಗಿದ್ದರು.
* ೧೯೨೧ರಲ್ಲಿ ಗೆಳೆಯರ ಗುಂಪು ಕಟ್ಟಿ ಸಾಹಿತ್ಯಕ್ಕಾಗಿ ದುಡಿದರು.
* ಜಯಕರ್ನಾಟಕ ಮಾಸಪತ್ರಿಕೆ ನಡೆಸಿದರು.

ಸಾಹಿತ್ಯಕೃತಿಗಳು :
ಕವನ ಸಂಕಲನಗಳು :
೧೯೧೮ ರಲ್ಲಿ ಪ್ರಭಾತ ಪತ್ರಿಕೆಯಲ್ಲಿ ಇವರ ಮೊದಲಕವನ ಬೆಳಗು ಪ್ರಕಟವಾಯಿತು.

೧೯೩೧ರಲ್ಲಿ ಮೊದಲ ಕವನ ಸಂಕಲನ ಪ್ರಕಟವಾಯಿತು.

ಕೃಷ್ಣಕುಮಾರಿ, ಮೂರ್ತಿ, ಗರಿ, ನಾದಲೀಲೆ, ಸಖೀಗೀತ, ಉಯ್ಯಾಲೆ, ಮೇಘದೂತ, ಬೇಂದ್ರೆ ವಾಜ್ಮಯ ದರ್ಶನ, ಗಂಗಾವತರಣ, ಅರಳು ಮರಳು, ಮತ್ತೆ ಶ್ರಾವಣ ಬಂತು.
ನಾಟಕಗಳು :
ಸಾಯೋ ಆಟ, ದೆವ್ವದ ಮನೆ, ಹೊಸಸಂಸಾರ.
ವಿಮರ್ಶಾ ಗ್ರಂಥಗಳು :
ನಿರಾಭರಣ ಸುಂದರಿ, ಕಥಾಸಂಕಲನ, ಸಾಹಿತ್ಯದ ವಿರಾಟ್ ಸ್ವರೂಪ.
ಅನುವಾದಿತ ಕೃತಿಗಳು :
ಶಾಂತಲಾ, ವಿಠಲ ಸಂಪ್ರದಾಯ, ಸಂವಾದ-ಮರಾಠಿ ಯಲ್ಲಿ ರಚಿಸಿದ ಕೃತಿಗಳು.
 ಪ್ರಶಸ್ತಿ ಪುರಸ್ಕಾರಗಳು :-
·  ೧೯೩೫ರಲ್ಲಿ ಮುಂಬಯಿಯಲ್ಲಿ ಕನ್ನಡ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.

·  ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

·  ೧೯೫೮ರಲ್ಲಿ ಇವರ 'ಅರಳು ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

·  ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

·  ೧೯೭೩ರಲ್ಲಿ 'ನಾಕುತಂತಿ' ಕೃತಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು.

·  ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪಡೆದರು.

·  ೧೯೬೮ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ಲಭಿಸಿತು.

·  ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.



ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :

ಇಳಿದು ಬಾ ತಾಯಿ, ವರಕವಿ ಬೇಂದ್ರೆ- ಸಂಸ್ಮರಣಾ ಗ್ರಂಥ



ಕವಿ ಸಂದೇಶ :

"ಕನ್ನಡೇತರ ಭಾಷೆ ಕಲಿತರೂ ಕನ್ನಡವನ್ನು ಮರೆಯದಿದ್ದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ"










.ರಾ.ಬೇಂದ್ರೆಯವರು ಜೀವನವನ್ನು ಒಂದು ದೃಶ್ಯಕಾವ್ಯವಾಗಿ ಕಂಡವರು. ಜೀವನವನ್ನು ಸಾಕ್ಷಿಪ್ರಜ್ಞೆಯಿಂದ ಅವಲೋಕಿಸಿದ ಕವಿ ಅವರು. ಅವರ ಕಾವ್ಯದಲ್ಲಿ ಜೀವನದೃಷ್ಟಿ, ಸಾಕ್ಷಿಪ್ರಜ್ಞೆ ಮತ್ತು ಅನುಭಾವ ಇವು ಢಾಳವಾಗಿ ವಿಜೃಂಭಿಸುತ್ತವೆ.
'ಹಕ್ಕಿಹಾರುತಿದೆ ನೋಡಿದಿರಾ' ಕವನ ಬೇಂದ್ರೆಯವರ 'ಗರಿ' ಕವನಸಂಕಲನದಲ್ಲಿದೆ.
ಜಗತ್ತನ್ನು, ಜೀವ-ಜೀವನಗಳನ್ನು, ಮಾತ್ರವಲ್ಲ, ಅಖಿಲ ಬ್ರಹ್ಮಾಂಡವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವಕಾಲವನ್ನು ಹಕ್ಕಿಗೆ ಹೋಲಿಸಿ ವರಕವಿ ರಚಿಸಿರುವ ರೂಪಕಹಕ್ಕಿ ಹಾರುತಿದೆ ನೋಡಿದಿರಾ?’ ಇದು ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಕವಿತೆಗಳಲ್ಲೊಂದು. ಕಾಲದ ಗತಿಯನ್ನು ಮತ್ತು ಆಯಾಮವನ್ನು ಹಕ್ಕಿಯ ಹಾರಾಟಕ್ಕೆ ಹೋಲಿಸಿ ಕವಿಯಿಲ್ಲಿ ಹಕ್ಕಿಯ ರೂಪ()ದಲ್ಲಿ ಕಾಲಕೋಶದಲ್ಲಿ ಪಯಣಿಸಿದ್ದಾರೆ.
ಅಮೂರ್ತ ಸ್ವರೂಪದ ಕಾಲವನ್ನು ಮೂರ್ತ ರೂಪದ ಹಕ್ಕಿಗೆ ಸಮೀಕರಿಸಿ ದೃಶ್ಯ ರೂಪ ನೀಡಿದ್ದಾರೆ.

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?  |೧|

ಭಾವಾರ್ಥ:  ಈ ಚರಣದಲ್ಲಿ ಕವಿ ಕಾಲದ ಗತಿಯನ್ನು ವೇಗವನ್ನು ಚಿತ್ರಿಸಿದ್ದಾರೆ. ಕಾಲದ ಹಕ್ಕಿಯು ಅಗಣಿತ ಇರುಳುಗಳನ್ನು ಕಳೆದು, ಅಪರಿಮಿತ ದಿನಗಳನ್ನು ಬೆಳಗುತ್ತಾ ಸುತ್ತಮುತ್ತ, ಮೇಲೆ-ಕೆಳಗೆ, ಹೀಗೆ ವಿಶ್ವವ್ಯಾಪಿಯೂ ಅನಂತವೂ ಆಗಿ (ಗಾವುದ ಗಾವುದ) ಮುಂದೆ ಮುಂದೆ ಸಾಗುತ್ತಿರುತ್ತದೆ. ಯಾರ, ಯಾವ ನಿಯಂತ್ರಣಕ್ಕೂ ಸಿಕ್ಕದೆ ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ಕಾಲ ಸಾಗಿರುತ್ತದೆ. ಹೀಗೆಯೇ ದಿನರಾತ್ರಿಗಳು ಕಳೆಯುತ್ತವೆ. ಕಾಲದ ಹಕ್ಕಿ ನಿರಂತರವಾಗಿ ಹಾರುತ್ತಿರುತ್ತದೆ.

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ  ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? |೨|

ಭಾವಾರ್ಥ: ಈ ಚರಣದಲ್ಲಿ ಕವಿ ಹಕ್ಕಿಯ ಕತ್ತಲು (ಕರಿ) ಬೆಳಕು(ನೆರೆ) ಎಂಬ ಪುಚ್ಚ(ಹಕ್ಕಿಯ ಹಿಂಬದಿಯಲ್ಲಿರುವ ಬಾಲದಂತ ಗರಿಗಳ ಗುಚ್ಚ)ವನ್ನು ಹೊಂದಿದೆ. ವರ್ತಮಾನವೆಂಬ ಬಿಳಿಬಣ್ಣದ, ಹೊಳಪಿನ ಗರಿಯು ಕಾಲದ ಹಕ್ಕಿಯಲ್ಲಿ ಗರಿಗರಿಯಾಗಿ ಕಂಗೊಳಿಸುತ್ತಿದೆ! ವರ್ತಮಾನವಾದ್ದರಿಂದ ಅದು ಬೆಳಕಿನಲ್ಲಿದೆ. ಎಂದೇ ಬಿಳಿ-ಹೊಳೆ ಬಣ್ಣ. ವರ್ತಮಾನಕ್ಕೆಹೊಳೆ ಬಣ್ಣ. ವರ್ತಮಾನವು, ಹರಿಯುತ್ತಿರುವ (ಕಾಲದ) ಹೊಳೆಯೂ ಹೌದು. ಕೆನ್ನನಬಣ್ಣದ ಸೂರ್ಯಾಸ್ತ ಮತ್ತು ಹೊನ್ನಿನ ಬಣ್ಣದ ಸೂರ್ಯೋದಯ ಅದರ ಎರಡು ರೆಕ್ಕೆಗಳಾಗಿವೆ. ಇಲ್ಲಿ ಕಾಲದ ಹಕ್ಕಿಯ ಅನಂತ-ವಿಶಾಲ ರೂಪದ ಭವ್ಯತೆ ವ್ಯಕ್ತವಾಗಿದೆ.


ನೀಲಮೇಘಮಂಡಲ-ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? |೩|

ಭಾವಾರ್ಥ: ಕಾಲದ ಹಕ್ಕಿಯ ಬಣ್ಣ ನೀಲಮೇಘಮಂಡಲಸದೃಶವಾದುದು. ನೀಲಿ ಅಂದರೆ ವೈಶಾಲ್ಯ. ನೀಲಮೇಘಮಂಡಲದಂತೆ ಸಮಬಣ್ಣವೂ ಹೌದು. ಕಾಲದ ದೃಷ್ಟಿ ತರತಮರಹಿತ. ಕಾಲದ ಹಕ್ಕಿಯು ನೀಲಮೇಘಮಂಡಲದಂತೆ ಅಗಾಧ-ವ್ಯಾಪಕ-ವಿಶಾಲ. ಎಷ್ಟೆಂದರೆ, ಆಕಾಶಕ್ಕೆ ರೆಕ್ಕೆಗಳು ಮೂಡಿ ಅಕಾಶವೇ ಹಾರುತ್ತ ಸಾಗಿದಂತೆ! ಕಾಲದ ಹಕ್ಕಿಯಹಾರಾಟ’ (ಶ್ಲೇಷೆ ಗಮನಿಸಿರಿ) ಅಂಥದು! ಅನಾದಿಯೆಂಬ ಮುಗಿಲಿಗೆ ಮೂಡಿದ ರೆಕ್ಕೆಗಳೊಡನೆ, ಅನಂತವೆಂಬ ನೀಲಮೇಘಮಂಡಲದಲ್ಲಿ, ದಿನ-ಮಾಸ-ವರ್ಷ....ಯುಗ....ಮನ್ವಂತರ....ಕಲ್ಪ....ಗಳೆಂಬ ನಕ್ಷತ್ರಗಳ ಮಾಲೆ ಧರಿಸಿ, ದಿನ-ರಾತ್ರಿಗಳೆಂಬ ಸೂರ್ಯ-ಚಂದ್ರರನ್ನು ಕಣ್ಣುಗಳಾಗಿ ಹೊಂದಿ, ನೋಡುತ್ತ, ತೋರುತ್ತ, ತೋರಿಸುತ್ತ ಕಾಲದ ಹಕ್ಕಿಯು ಹಾರುತ್ತಿದೆ.

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? |೪|

ಭಾವಾರ್ಥ: ಇಲ್ಲಿ ಕಾಲದ ಶಕ್ತಿ ಸಾಮರ್ಥ್ಯಗಳು, ಅದರ ಮುಂದೆ ಎಲ್ಲವೂ ನಶ್ವರ-ನಗಣ್ಯ ಎಂಬ ಭಾವ ವ್ಯಕ್ತವಾಗಿದೆ. ರಾಜ್ಯ-ಸಾಮ್ರಾಜ್ಯಗಳ ಭರ್ಜರಿ ತೆನೆಗಳನ್ನೆಲ್ಲ ಒಕ್ಕಿ-ಬಡಿದು-ಗಾಳಿಗೆ ತೂರಿತ್ತಾ, ಚಿಕ್ಕಪುಟ್ಟ ಮಂಡಲ-ಗಿಂಡಲಗಳ ಕೋಟೆಕೊತ್ತಲಗಳನ್ನೆಲ್ಲ ಮುಕ್ಕಿ ಮುಗಿಸುತ್ತಾ, ಖಂಡ-ಖಂಡಗಳನ್ನೇ (ಒಂದೆಡೆ ಪ್ರಾಕೃತಿಕ ಬದಲಾವಣೆ-ಪ್ರಗತಿ-ವಿಜ್ಞಾನ; ಇನ್ನೊಂದೆಡೆ ಯುದ್ಧ-ಪ್ರಕೃತಿವಿಕೋಪ-ವಿನಾಶ ರೀತಿ) ತೇಲಿಸಿ-ಮುಳುಗಿಸಿ, ‘ಸಾರ್ವಭೌಮರೆಲ್ಲರ ನೆತ್ತಿಯ ಕುಕ್ಕಿ ಅಂದರೆ ಮಹಾನ್ ಮಹಾನ್ ಸಾರ್ವಭೌಮ-ಸಾಮ್ರಾಟ-ಚಕ್ರವರ್ತಿ ಎಂದು ಮೆರೆದವರೂ ಇದರ ಮುಂದೆ ಸೋಲಲೇ ಬೇಕಾಯಿತು. ಅಂಥವರನ್ನೆಲ್ಲಾ ಕಾಲದ ಹಕ್ಕಿ ಹೊಸಕಿಹಾಕುತ್ತಾ ಇತಿಹಾಸ ಮಾಡಿ ನಿರಂತರ ಬದಲಾವಣೆಗಳನ್ನು ಮಾಡುತ್ತಾ ಇಲ್ಲಿ ಯಾವುದೂ ಯಾರೂ ಶಾಶ್ವತವಲ್ಲ ಎಂಬುದನ್ನು ಸಾರುತ್ತಾ ಹಾರುತ್ತಿದೆ.

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? |೫|

ಭಾವಾರ್ಥ: ಇಲ್ಲಿ ಕಾಲದ ಪರಿವರ್ತನಾಶಿಲತೆ, ನವೀನಶಿಲತೆಯನ್ನು ಚಿತ್ರಿಸಲಾಗಿದೆ. ಕಾಲದ ಹಕ್ಕಿಯು: ಯುಗಯುಗಗಳ ಆಗುಹೋಗುಗಳನ್ನು ತಿಕ್ಕಿ-ತೀಡಿ, ಚರಿತ್ರೆಯನ್ನು ಹಿಂದೆಬಿಟ್ಟು (ಅಳಿಸಿ-ಒರಸಿ), ಮನ್ವಂತರಗಳ (ಅಂದರೆ ದೀರ್ಘ ಕಾಲಾವಧಿಯ) ಭಾಗ್ಯಕ್ಕೆ (ಅಂದರೆ ಪ್ರಗತಿಗೆ) ಹೇತುವಾಗಿ-ಸಾಕ್ಷಿಯಾಗಿ, ಮನ್ವಂತರಗಳ (ಅಂದರೆ ಪರಿವರ್ತನೆಯ ಸಮಯದ) ಭಾಗ್ಯಕ್ಕೆ (ಅಂದರೆ ಇತ್ಯಾತ್ಮಕ ಬದಲಾವಣೆಗಳಿಗೆ) ಹೇತುವಾಗಿ-ಸಾಕ್ಷಿಯಾಗಿ, ರೆಕ್ಕೆಯ ಬೀಸುತ್ತ (ಅಂದರೆ ಕಾಲಕ್ರಮದಲ್ಲಿ) ಚೇತನಗೊಳಿಸಿ (ಅಂದರೆ ಪ್ರಗತಿಯ ಕಸುವು ನೀಡಿ), ಹೊಸಗಾಲದ ಹಸುಮಕ್ಕಳ ಹರಸಿ (ಅಂದರೆ ಬದಲಾದ ಲೋಕಕ್ಕೆ ಕಣ್ಣುತೆರೆದ ಅಂದಂದಿನ ಜನರನ್ನು-ಜೀವಿಗಳನ್ನು ಮುನ್ನಡೆಸಿ ಮತ್ತು ಇಂದಿನ ಲೋಕಕ್ಕೆ ಕಣ್ಣುತೆರೆದಿರುವವರನ್ನು ಮುನ್ನಡೆಸುತ್ತ) ಕಾಲದ ಹಕ್ಕಿಯು ಹಾರುತ್ತಿದೆ (ಕಾಲ ಸಾಗುತ್ತಿದೆ).

*****
[ಪಠ್ಯದಲ್ಲಿ ಕೈಬಿಡಲಾಗಿರುವ ಕೊನೆಯ ಎರಡು ಚರಣಗಳು ಹೀಗಿವೆ]

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? |೬|

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? |೭|

. ಬೆಳ್ಳಿಯ, ಅಂದರೆ ಶುಕ್ರಗ್ರಹದ ವಾಯುಮಂಡಲವನ್ನು ಪ್ರವೇಶಿಸಿದ ನಾವು, ತಿಂಗಳಿನೂರಿನ, ಅಂದರೆ ತಿಂಗಳಬೆಳಕಿನ ಚಂದ್ರನತಂಪುನೆಲ ತುಳಿದ ನಾವು ಇದೀಗ ಮಂಗಳಗ್ರಹದ ಅಂಗಳವನ್ನೂ ತಲುಪಿದ್ದೇವೆ. ಕಾಲಾಂತರದಲ್ಲಿ ನಮ್ಮ ಸಾಧನೆಯಿದು.

. ಹೀಗೆ ನಾವು ದಿಕ್ಕುದಿಕ್ಕುಗಳೆಡೆ ನಮ್ಮ ಗಮನ ಹರಿಸಿದ್ದೇವೆ, ಗತಿಶೀಲರಾಗಿದ್ದೇವೆ. ವಿಶ್ವ()ರೂಪವನ್ನರಿಯಲೆತ್ನಿಸುತ್ತಿದ್ದೇವೆ. ’ಆಚೆಗೆ’, ಅರ್ಥಾತ್, ಅಧ್ಯಾತ್ಮದೆಡೆಗೂ ನಮ್ಮ ಗಮನವನ್ನು ಹರಿಯಬಿಟ್ಟಿದ್ದೇವೆ. ನಮ್ಮ ಗತಿಯು ಕಾಲಕ್ರಮದಲ್ಲಿ ಬ್ರಹ್ಮಾಂಡದ ರಹಸ್ಯವನ್ನು ಒಡೆಯುತ್ತದೆಯೇ ಅಥವಾ ವಿಶ್ವವನ್ನೇ ಹೋಳುಮಾಡುತ್ತದೆಯೇ ಬಲ್ಲವರು ಯಾರು? ಇಂಥ ಯಾವುದೋ ಘಟನೆಗೆ ಸೃಷ್ಟಿಕರ್ತ ಹಾಕಿರುವ ಹೊಂಚೇ ಇದೆಲ್ಲ? ಸೃಷ್ಟಿಕರ್ತನೋ, ವಿಶ್ವದ ಇನ್ನಾವುದೋ ಶಕ್ತಿಯೋ ಅಥವಾ ಎಲ್ಲ ತಂತಾನೆಯೋ? ಇದೆಲ್ಲ ಉದ್ದೇಶಿತವೋ ಅನುದ್ದೇಶಿತವೋ? ಯಾರು ಬಲ್ಲರು? ಗೂಢಗಳನ್ನೊಳಗೊಂಡಿರುವಕಾಲವೆಂಬ ಹಕ್ಕಿಯು ಹಾರುತ್ತಿದೆ. ಕಾಲ ಸಾಗುತ್ತಿದೆ.
*****