8 ಪದ್ಯ -5

ವಚನಾಮೃತ (ಪದ್ಯ-5)

ಶರಣೆಯರ ವಚನಾಮೃತ ಪದ್ಯಭಾಗದಲ್ಲಿ ಅಕ್ಕಮಹಾದೇವಿ, ಅಮ್ಮುಗೆ ರಾಯಮ್ಮ ಮತ್ತು ಆಯ್ದಕ್ಕಿಮಾರಯ್ಯ ಇವರ ಆಯ್ದ ವಚನಗಳಿವೆ.
೧) ಅಕ್ಕಮಹಾದೇವಿಯ ಪರಿಚಯ
ಅಕ್ಕಮಹಾದೇವಿ (ಚಿತ್ರಕೃಪೆ:ಶರಣು.ಕಾಂ)


ಅಕ್ಕನ ಜೀವನ
  • ಕಾಲ: ೧೨ನೇ ಶತಮಾನ
  • ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ.
  • ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತನ್ನನ್ನು ತಾವೂ ತೊಡಗಿಸಿಕೊಂಡಳಲ್ಲದೇ, 
  • "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತನ್ನದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾಳೆ.
  • "ಯೋಗಾಂಗತ್ರಿವಿಧಿ" ಅಕ್ಕಮಹಾದೇವಿಯ ಪ್ರಮುಖ ಕೃತಿ.  ಅಲ್ಲದೆ ‘ಸೃಷ್ಟಿ ವಚನ’ ಮತ್ತು ‘ಮಂತ್ರ ಗೋಪ್ಯ’ ಎಂಬ ಲಘು ಕೃತಿಗಳನ್ನೂ ರಚಿಸಿದ್ದಾಳೆ.
  • ಕನ್ನಡ ಸಾಹಿತ್ಯ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವಳೀಕೆ. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವಳು.
ಅಕ್ಕನ ಅನುಭಾವ ಜೀವನ
        ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವಳ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವಳ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ 'ಮಹಾದೇವಿಯಕ್ಕಗಳ ರಗಳೆ' ಮತ್ತು ಸ್ವತಃ ಅಕ್ಕಮಹಾದೇವಿಯೇ ರಚಿಸುವ ವಚನಗಳೂ, ಅವಳ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ , ನುಡಿ, ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ . ವಚನ ಚಳುವಳಿಯ ಸಮಯದಲ್ಲಿ, ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮ ಮತ್ತು ಅಕ್ಕ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅನುಭಾವಿಯೂ, ಕವಿಯೂ ಆಗಿದ್ದ ಅಕ್ಕಮಹಾದೇವಿಯ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವಳ ಬರಹಗಳು ಗಮನಾರ್ಹವಾಗಿವೆ.
  • ಉದಾ: 'ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ',
  • 'ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ' ,
  • 'ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು'- ಮುಂತಾದ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ, ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ .
ಅಕ್ಕನ ಹಿರಿಮೆ
ಶೂನ್ಯ ಸಂಪಾದನೆಕಾರರು 'ಮಹಾದೇವಿಯಕ್ಕಗಳ ಸಂಪಾದನೆ' ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವಳಿಗೆ ಗೌರವ ತೋರಿದ್ದಾರೆ. ಹರಿಹರ ಮಹಾಕವಿಯ ಮಹಾದೇವಿಯಕ್ಕನ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ 'ಕದಳಿಯ ಕರ್ಪುರ' ಅಕ್ಕನ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು . ಅಕ್ಕಮಹಾದೇವಿಯ ಜೀವನದಲ್ಲಿ ನಿರ್ಣಾಯಕ ಘಟನೆಗಳಲ್ಲಿ, ಪ್ರಮುಖವಾದವುಗಳು ಈ ಎರಡು,
  • ಒಂದನೆಯದು: ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು.
  • ಎರಡನೆಯದು : ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದುದು. ಅಕ್ಕನ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ, ಎನ್ನುವಷ್ಟು ಅಪೂರ್ವ ಸ್ವಾಗತ ಆಕೆಗೆ ಶರಣರಿಂದ ದೊರಕಿತು. ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನ ನಡುವೆ ನಡೆಯಿತೆನ್ನಲಾದ ಸಂಭಾಷಣೆ ; ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.   
ಅಕ್ಕಮಹಾದೇವಿಯ ಆಯ್ದ ವಚನಗಳು
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿ ನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿ ನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವ ನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವ ನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿ ಕೊಂಡಿದ್ದರೇನು? ತನ್ನ ಪರಿ ಬೇರೆ!

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.

ನರ-ಜನ್ಮವ ತೊಡೆದು
ಹರ-ಜನ್ಮವ ಮಾಡಿದ ಗುರುವೆ
ಭವ ಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೆ
ಭವಿ ಎಂಬುದ ತೊಡೆದು
ಭಕ್ತೆ ಎಂದೆನಿಸಿದ ಗುರುವೆ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ
ಕೊಟ್ಟ ಗುರುವೆ ನಮೋ ನಮೋ

ಅಕ್ಕ-ಅನುಭವ ಮಂಟಪದಲ್ಲಿ

             ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ.
ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ,
ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ.
ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ.
ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು.
ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು.
ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ?
ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ?
ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ.
ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ.
ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ?
ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ.
ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ.
ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ.
ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ?
ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ.
ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು)
ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು)
ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು.
ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ. ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ? ;ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.
ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ.
ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.
ಬಸವಣ್ಣ : ಶರಣು ತಾಯೇ ಶರಣು ಶರಣು.
ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.
          ಚನ್ನಬಸವಣ್ಣ : ಶರಣು ತಾಯೇ ಶರಣು.
ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ.
ಸಿದ್ಧರಾಮ : ಶರಣು ತಾಯೇ ಶರಣು.
ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ.
ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು
ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು. ಆಗ ಅಕ್ಕನು ಶರಣ ಶರಣೆಯರ ನಡುವೆ ಕುಳಿತು ಅಂದಿನ ಗೋಷ್ಠಿಯಲ್ಲಿ ಭಾಗವಹಿಸುವಳು.

ಲಿಂಗೈಕ್ಯ

ಕೊನೆಗೆ ಅಕ್ಕಮಹಾದೇವಿ ತನ್ನ ಇಷ್ಟದೈವ ಮಲ್ಲಿಕಾರ್ಜುನನಲ್ಲಿ ಶ್ರಿಶೈಲಕದಳಿವನದಲ್ಲಿ ಐಕ್ಯಳಾದಳು.

***********
೨) ಅಮುಗೆರಾಯಮ್ಮನ ಪರಿಚಯ
ಇವಳ ಕಾಲ: ಕ್ರಿ.ಶ. ಸು. ೧೧೬೦ (೧೨ನೆಯ ಶತಮಾನ)
ಸ್ಥಳ: ಸೊನ್ನಲಿಗೆ (ಈಗಿನ ಸೊಲ್ಲಾಪುರ)
ಇವಳ ಮೊದಲ ಹೆಸರು : ವರದಾನಿಯಮ್ಮ.
ಇವಳ ಪತಿ: ಅಮುಗೆ ದೇವಯ್ಯ
ಇವಳ ಕಾಯಕ : ನೇಯ್ಗೆ 
ಇವಳ ಅಂಕಿತ ನಾಮ: ಅಮುಗೇಶ್ವರ ಲಿಂಗ, ಅಮುಗೇಶ್ವರಾ
ಇವಳ ಸಮಕಾಲೀನ ವಚನಕಾರ್ತಿಯರೆಂದರೆ: ಅಕ್ಕಮಹಾದೇವಿ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ, ಅಕ್ಕನಾಗಮ್ಮ, ದುಗ್ಗಳೆ ಮುಂತಾದವರು.
ದೊರಕಿರುವ ವಚನಗಳ ಸಂಖ್ಯೆ: 115
ಅಮುಗೆಯ ದೇವಯ್ಯ ಮತ್ತು ಅಮುಗೆರಾಯಮ್ಮ (ಚಿತ್ರ ಕೃಪೆ::lingayatreligion.com)
           ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. 
ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು'. 
        - ಇದು ರಾಯಮ್ಮನ ಅನಿಸಿಕೆ.
*************
೩) ಆಯ್ದಕ್ಕಿ ಮಾರಯ್ಯನ ಪರಿಚಯ
ಕಾಲ: ೧೧೬೦ (೧೨ನೆಯ ಶ.) ದಲ್ಲಿ ಬಸವಣ್ಣನವರ ಸಮಕಾಲೀನನಾಗಿ ಕಲ್ಯಾಣದಲ್ಲಿದ್ದ ಒಬ್ಬ ಶರಣ.
ಸ್ಥಳ: ರಾಯಚೂರು ಜಿಲ್ಲೆಯ ಅಮರೇಶ್ವರ
ಪತ್ನಿಯ ಹೆಸರು: ಆಯ್ದಕ್ಕಿ ಲಕ್ಕಮ್ಮ
ದೊರೆತಿರುವ ವಚನಗಳ ಸಂಖ್ಯೆ: ೩೨
ಅಂಕಿತ: ಅಮರೇಶ್ವರ ಲಿಂಗ
           ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬನಾದ ಈ ಶರಣನು ಬಸವಣ್ಣನವರ ಮಹಾಮನೆಯ ಮುಂದೆ ಚೆಲ್ಲಿದ ಅಕ್ಕಿಯನ್ನು ಆಯುವ ಕಾಯಕ ಮಾಡುತ್ತಿದ್ದರಿಂದಲೇ ಆಯ್ದಕ್ಕಿ ಮಾರಯ್ಯನೆಂದು ಪ್ರಸಿದ್ಧನಾಗಿದ್ದಾನೆ. 
          ಒಮ್ಮೆ ಅನುಭವ ಮಂಟಪದಲ್ಲಿ ಕಾಯಕವನ್ನು ಕುರಿತು ಆತ ಎತ್ತಿದ ಸಂದೇಹವನ್ನೂ ಅದಕ್ಕೆ ಅಲ್ಲಮಪ್ರಭು ಕೊಟ್ಟ ಉತ್ತರವನ್ನೂ ಶೂನ್ಯ ಸಂಪಾದನೆ ಬಹಳ ಅರ್ಥವತ್ತಾಗಿ ಚಿತ್ರಿಸಿದೆ: 
ಕಾಯಕದಲ್ಲಿ ನಿರತನಾದರೆ,
ಗುರುದರ್ಶನವಾದಡೂ ಮರೆಯಬೇಕು;
ಲಿಂಗಪುಜೆಯಾದಡೂ ಮರೆಯಬೇಕು;
ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.
        ಅವನ ಈ ಮಾತು ಕಾಯಕನಿಷ್ಠೆಯನ್ನು ತೋರಿಸುತ್ತದೆ. ನಿಜ ಆದರೆ ಅಲ್ಲಿ ಇನ್ನೊಂದು ಧ್ವನಿಯಿದೆ. ಕಾಯಕವೇ ಕೈಲಾಸವಾದುದರಿಂದ ಗುರು ಲಿಂಗ ಜಂಗಮ ಈ ತ್ರಿವಿಧದಾಸೋಹದ ಹಂಗಾದರೂ ಏತಕ್ಕೆ ಎಂಬ ಪ್ರಶ್ನೆಗೆ ಅಲ್ಲಮ ಸರಿಯಾದ ಉತ್ತರ ಕೊಡುತ್ತಾನೆ. ಹೊಟ್ಟೆಪಾಡಿನ ಉದ್ಯೋಗ ಕಾಯಕವಾಗಬೇಕಾದರೆ ತ್ರಿವಿಧದಾಸೋಹ ದಿಂದ ಮಾತ್ರ ಸಾಧ್ಯ. ಮಾಡುವ ಮಾಟದಿಂದವೆ ಬೇರೊಂದನರಿಯಬೇಕು; ಅರಿವಿಂಗೆ ನೆಮ್ಮುಗೆ ಒಡಗೂಡಬೇಕು. ಇದಕ್ಕೆ ತ್ರಿವಿಧದಾಸೋಹವೇ ಸಾಧನವೆಂದು ಅಲ್ಲಮಪ್ರಭು ಕಾಯಕದ ರಹಸ್ಯವನ್ನು ಬಿತ್ತರಿಸುವುದಕ್ಕೆ ಈತನೆತ್ತಿದ ಸಂದೇಹ ನೆಪಮಾತ್ರವಾಗುತ್ತದೆ. ವಾಸ್ತವವಾಗಿ ಕಾಯಕದ ಪುರ್ಣಸ್ವರೂಪವನ್ನು ನಿತ್ಯಜೀವನದ ಆಚರಣೆಯಲ್ಲಿ ಸಾಧಿಸಿ ತೋರಿಸುತ್ತಿದ್ದವ ಮಾರಯ್ಯ. ಆತನ ಪತ್ನಿ ಲಕ್ಕಮ್ಮನಂತೂ ಕಾಯಕನಿಷ್ಠೆಯೇ ಮೈವೆತ್ತ ಮೂರ್ತಿ.
ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ (ಚಿತ್ರಕೃಪೆ:lingayatreligion.com)
ಮ್ಮೆ ಮಾರಯ್ಯ ಅಗತ್ಯವಾದುದಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತಂದಾಗ ಈಸಕ್ಕಿಯ ಆಶೆ ನಿಮಗೇಕೆ, ಈಶ್ವರನೊಪ್ಪ ಎಂದು ಹೆಚ್ಚಾದ ಅಕ್ಕಿಯನ್ನು ಮತ್ತೆ ಹಿಂದಕ್ಕೆ ಸುರಿಸಿದ ದಿಟ್ಟತನ ಆಕೆಯದು. ಅಂದಂದಿನ ಕಾಯಕವನ್ನು ಅಂದಂದು ಮಾಡಿ ಶುದ್ಧರಾಗಬೇಕು ಎಂಬ ನಿಸ್ಪೃಹ ನಿಷ್ಠೆಯಿಂದ ತಮ್ಮ ಸಾಧನೆಯ ಫಲವನ್ನು ಲೋಕಕ್ಕೆ ವಿನಿಯೋಗಿಸಿದ ಈ ದಂಪತಿಗಳು ವಚನಕಾರರೂ ಹೌದು. ಅಮರೇಶ್ವರ ಲಿಂಗ ಎಂಬ ಅಂಕಿತದಿಂದ ಮಾರಯ್ಯ ವಚನಗಳನ್ನು ಬರೆದು ಶರಣರಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ.
 ************
ವಚನಗಳ ಭಾವಾರ್ಥ

 ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ದ್ವಾಪರಯುಗದಲ್ಲಿ ಶ್ರೀಗುರುವು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ
ನಾ ಬೆರಗಾದೆನು.                                             -ಅಲ್ಲಮಪ್ರಭು


ಸಾರಾಂಶ: ಅಲ್ಲಮ ಪ್ರಭುವು ಈ ವಚನದಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ಗುರು-ಶಿಷ್ಯರ ಶೈಕ್ಷಣಿಕ ಸಂಬಂಧ ಹಾಗೂ ಗುರುಗಳ ಮೇಲೆ ಶಿಷ್ಯರಿಗಿದ್ದ ಗೌರವಭಾವನೆಯನ್ನು ವರ್ಣಿಸಿದ್ದಾನೆ. ಕೃತಯುಗದಲ್ಲಿ ಗುರುವು ಶಿಷ್ಯನಿಗೆ ಬಡಿದು ಶಿಕ್ಷಿಸಿ ಬುದ್ದಿಯನ್ನು ಕಲಿಸಿದರೆ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು. ತ್ರೇತಾಯುಗದಲ್ಲಿ ಗುರುವು ಬೈದು ಬುದ್ಧಿಯನ್ನು ಕಲಿಸಿದರೆ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು. ದ್ವಾಪರ ಯುಗದಲ್ಲಿ ಗುರುವು ಗದರಿಸಿ ಬುದ್ಧಿಯನ್ನು ಕಲಿಸಿದರೆ ಆಗ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸಿದನು. ಆದರೆ ಈ ಕಲಿಯುಗದಲ್ಲಿ ಗುರುವು ಶಿಷ್ಯನಿಗೆ ವಂದಿಸಿ ಬುದ್ಧಿಯನ್ನು ಕಲಿಸಿದರೆ ಮಾತ್ರ ಅದನ್ನು ಶಿಷ್ಯನು ಮಹಾ ಪ್ರಸಾದವೆಂದು ಸ್ವೀಕರಿಸುತ್ತಾನೆ.
ಈ ವಚನದಲ್ಲಿ, ಕಾಲದಿಂದ ಕಾಲಕ್ಕೆ ಗುರುವಿನ ಬಗ್ಗೆ ಶಿಷ್ಯರಿಗಿರುವ ಗೌರವಭಾವನೆ ಕ್ಷೀಣಿಸುತ್ತಿರುವುದು ಮತ್ತು ಅವರ ನೈತಿಕ ಮಟ್ಟ ಕುಸಿದಿರುವುದನ್ನು ಮಾರ್ಮಿಕವಾಗಿ ತಿಳಿಸಲಾಗಿದೆ.

ಕಾಯಕದಲ್ಲಿ ನಿರತನಾಡೆ
ಗುರುದರ್ಶನವಾದಡೂ ಮರೆಯಬೇಕು;
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು         - ಆಯ್ದಕ್ಕಿ ಮಾರಯ್ಯ

ಸಾರಾಂಶ: ಆಯ್ದಕ್ಕಿ ಮಾರಯ್ಯನು ಈ ವಚನದಲ್ಲಿ, ಕಾಯಕದ ಮಹತ್ವವನ್ನು ತಿಳಿಸಿದ್ದಾನೆ. ಕಾಯಕವೆಂದರೆ ಯಾವುದಾದರೊಂದು ದೈಹಿಕ ಶ್ರಮ. ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿನಿತ್ಯ ಏನಾದರೊಂದು ದೈಹಿಕ ಶ್ರಮ ಮಾಡಿಯೇ ಜೀವಿಸಬೇಕು ಮತ್ತು ಕಾಯಕದಲ್ಲಿ ನಿಷ್ಠೆ ಇರಬೇಕು.
ಕಾಯಕ ನಿಷ್ಠೆ ಹೇಗಿರಬೇಕೆಂದರೆ ಕಾಯಕದಲ್ಲಿ ತೊಡಗಿದ್ದಾಗ ಗುರುದರ್ಶನವನ್ನಾದರೂ ಲಿಂಗಪೂಜೆಯನ್ನಾದರೂ ಮರೆಯಬೇಕು. ವಚನಕಾರರು ಜಂಗಮರಿಗೆ ಬಹಳ ಉನ್ನತ ಸ್ಥಾನವನ್ನು ನೀಡಲಾಗಿದ್ದು ಅಂತಹ ಜಂಗಮರು ಮುಂದೆ ನಿಂತಿದ್ದರೂ ಮೊದಲು ಕಾಯಕ ಮಾಡುವುದಕ್ಕೆ ಗಮನ ನೀಡಬೇಕು. ಏಕೆಂದರೆ ಕಾಯಕವು ಗುರು, ಲಿಂಗ, ಜಂಗಮಗಳನ್ನು ಮೀರಿದ್ದು. ’ಕಾಯಕವೇ ಕೈಲಾಸ’ ಎಂದು ಭಾವಿಸಿ ದೇವರಿಗಿಂತ ಕಾಯಕಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕೆಂಬುದು ಆಯ್ದಕ್ಕಿ ಮಾರಯ್ಯನ ವಚನದ ಆಶಯವಾಗಿದೆ. ’ಕಾಯಕವೇ ಕೈಲಾಸ’ ಎಂಬುದು ಈತನು ಜಗತ್ತಿಗೆ ನೀಡಿದ ಧ್ಯೇಯವಾಕ್ಯವಾಗಿದೆ.

ಕಾಗೆಯಮರಿ ಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲದೆ ?
ಸೀಳ (ಳು) ನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಅಮುಗೇಶ್ವರಾ.            - ಅಮುಗೆರಾಯಮ್ಮ

  
ಸಾರಾಂಶ: ಅಮುಗೆ ರಾಯಮ್ಮ ಈ ವಚನದಲ್ಲಿ ಡಾಂಭಿಕ ಆಚರಣೆ ಮತ್ತು ಹುಟ್ಟುಗುಣವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಕಾಗೆಯ ಮರಿ ಎಂದಿಗೂ ಕೋಗಿಲೆ ಆಗಲು ಸಾಧ್ಯವಿಲ್ಲ. ಆಡಿನ ಮರಿ ಆನೆಯಾಗಲು ಸಾಧ್ಯವಿಲ್ಲ. ಕಾಡುನಾಯಿ (ಸೀಳು ನಾಯಿ) ಸಿಂಹದ ಮರಿಯಾಗಲು ಸಾಧ್ಯವಿಲ್ಲ. ಅರಿವು, ಸದಾಚಾರ ಹಾಗು ಒಳ್ಳೆಯ ವಿವೇಕ ಇಲ್ಲದೆ ಕೇವಲ ನಾಮವನ್ನು ಹಾಕಿಕೊಂಡು ಜ್ಞಾನಿಯಂತೆ ಮೆರೆಯುವವರು ದಡ್ಡರು. ಅಂತಹವರ ಮುಖ ನೋಡಲೂ ಅಸಹ್ಯವೆನಿಸುತ್ತದೆ ಎಂದು ಅಮುಗೆ ರಾಯಮ್ಮ ಜ್ಞಾನವಿಲ್ಲದ ಅಜ್ಞಾನಿಗಳ ಡಾಂಭಿಕ ಆಚರಣೆಗೆ ಮರುಳಾಗಬಾರದು ಎಂದು ಸಂದೇಶ ನೀಡಿದ್ದಾರೆ.

ಮನವ ಗೆದ್ದೆಹನೆಂದು, ತನುವ ಕರಗಿಸಿ ಕಾಯವ ಮರುಗಿಸಿ,
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತಿಹನೆಂಬ ಬುದ್ಧಿಹೀನರಿರಾ ನೀವು ಕೇಳಿರೋ
ನಮ್ಮ ಶರಣರು ಮನವನೆಂತು ಗೆದ್ದಿಹರೆಂದಡೆ
ಕಾಮ ಕ್ರೋಧವ ನೀಗಿ, ಲೋಭ ಮೋಹ ಮದಮತ್ಸರವ ಛೇದಿಸಿ,
ಆಸೆ ರೋಷವಳಿದು, ಜಗದ ಪಾಶವ ಬಿಟ್ಟು,
ಆ ಮರುಗಿಸುವ ಕಾಯಕವನೆ ಪ್ರಸಾದ ಕಾಯಕವ ಮಾಡಿ ಸಲಹಿದರು
ಕೆಡಿಸುವ ನಿದ್ರೆಯೆನೆ ಯೋಗ ಸಮಾಧಿಯ ಮಾಡಿ,
ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತ ಬಲ್ಲರೊ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ?                                                  - ಶಿವಶರಣೆ ಲಿಂಗಮ್ಮ


ಸಾರಾಂಶ: ತಮ್ಮ ಮನವನ್ನು ಗೆದ್ದೆವೆಂದು ಯೋಗಿಯ ಸೋಗು ಹಾಕುವ ಬುದ್ಧಿಹೀನರಿಗೂ ನಿಜವಾಗಿ ತಮ್ಮ ಮನವನ್ನು ಗೆದ್ದ ಜಂಗಮರಿಗೂ ಇರುವ ವ್ಯತ್ಯಾಸವನ್ನು ಶಿವಶರಣೆ ಲಿಂಗಮ್ಮ ಈ ವಚನದಲ್ಲಿ ತಿಳಿಸಿದ್ದಾರೆ.
ಕೆಲವರು ಕಾಯಕ ಮಾಡದೆ ಕೇವಲ ದೈಹಿಕ ದಂಡನೆ ಮಾಡಿ, ಮನವನ್ನು ಶುದ್ಧಮಾಡಿಕೊಳ್ಳದೆ; ನಿದ್ದಗೆಟ್ಟು ವಿದ್ಯೆ ಕಲಿತಿರುವೆನೆಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಜಯಿಸಿ; ಆಸೆ, ರೋಷ, ಜಗದ ಮೋಹವನ್ನು ಬಿಟ್ಟು; ಕಾಯಕವನ್ನೆ ಪ್ರಸಾದವೆಂದು ತಿಳಿದು; ನಿದ್ರೆಯನ್ನೆ ಯೋಗ ಸಮಾಧಿಯನ್ನಾಗಿ ಮಾಡಿಕೊಂಡು; ಸುಖವನ್ನು ತೊರೆದು ಜಗತ್ತನ್ನೆ ಗೆದ್ದವರೆಂದರೆ ಶರಣರು. ಅಂತಹವರನ್ನು ಬುದ್ಧಿ ಹೀನರು ಹೇಗೆ ತಾನೆ ಅರಿಯಲು ಸಾಧ್ಯ ಎಂದು ಲಿಂಗಮ್ಮನವರು ಅಭಿಪ್ರಾಯಪಟ್ಟಿದ್ದಾರೆ.

ಕಾಮೆಂಟ್‌ಗಳಿಲ್ಲ: